ಕಾಲೇಜು ವಿದ್ಯಾರ್ಥಿಗಳಲ್ಲಿ ಓದಿನ ಶಿಸ್ತು

ಡಾ. ಅ. ಶ್ರೀಧರ ಮನೋವಿಜ್ಞಾನಿ


ಉನ್ನತ ಶಿಕ್ಷಣದಲ್ಲಿ ಓದು ಮತ್ತು ಸಮಯ ಹೊಂದಾಣಿಕೆಯ ಮಹತ್ವ

ಬಹುಶಃ ಇಂದಿನ ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿರುವಷ್ಟು ಮಾಹಿತಿ ಮತ್ತು ಉಪಯುಕ್ತ ವಿಷಯಗಳು ಹಿಂದೆಂದೂ ಸಿಕ್ಕಿರಲಿಕ್ಕಿಲ್ಲ. ಒಂದು ವಿಷಯಕ್ಕೆ ಸಂಬಂಧಪಟ್ಟ ಸಾವಿರಾರು ಪುಟದಷ್ಟು ಮಾಹಿತಿಗಳನ್ನು ಪಟಪಟನೆ ಹೊರತರುವ ವಿದ್ಯುನ್ಮಾನ ಮಾಧ್ಯಮಗಳಿಗಿಂದು ಕೊರತೆಯೇ ಇಲ್ಲ. ಹಾಗೆಯೇ, ಇವುಗಳನ್ನು ಪಡೆದುಕೊಳ್ಳುವುದಕ್ಕೆ ಬೇಕಾದ ಯಂತ್ರ, ತಂತ್ರಗಳೂ ಸಹ ದುಬಾರಿಯೇನಲ್ಲ. ಹೀಗಿರುವಾಗ ಕಾಲೇಜು ವಿದ್ಯಾರ್ಥಿಗಳು ಅಗತ್ಯವಾಗಿ ತಿಳಿದುಕೊಳ್ಳಬೇಕಾಗಿರುವ ವಿಷಯವೆಂದರೆ ಇಂತಹ ಮಾಹಿತಿಗಳನ್ನು ಹೇಗೆ ವರ್ಗೀಕರಿಸಕೊಳ್ಳಬೇಕು? ಮತ್ತು, ಅವುಗಳಲ್ಲಿ ಉಪಯುಕ್ತವಾದುದನ್ನು ಮಾತ್ರ ನೆನಪಿನಲ್ಲಿ ಉಳಿಯುವುಂತೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕಷ್ಟೆ. ಇದನ್ನು ಗಳಿಸಿಕೊಳ್ಳಲು ಹೆಚ್ಚಿನ ಜಾಣತನವೇನು ಬೇಕಿಲ್ಲ. ಉಪಯುಕ್ತವೆನಿಸುವಂತಹÀ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಸ್ಪಷ್ಟ ರೀತಿಯನ್ನು ಕಲಿಯಬೇಕು. ಈ ಕಲಿಕೆಯನ್ನು ಸರಿಯಾದ ಕ್ರಮದಲ್ಲಿ ಗಳಿಸಿಕೊಳ್ಳುವುದು ಅತ್ಯಗತ್ಯ. ಕಲಿಕೆ ಎಂದಾಕ್ಷಣ ಓದು, ಬರಹ, ನೆನಪು, ವಿವೇಚನೆ, ಎಂದಷ್ಟೇ ಎಂಬುದಾಗಿ ತಿಳಿದಿದ್ದರೆ, ಅದು ಸರಿಯಲ್ಲ. ಇವೆಲ್ಲದರ ಹಿನ್ನೆಲೆಯಲ್ಲಿ ಸಮಯದ ಪ್ರಭಾವವು ಇರುತ್ತದೆ. ಸಮಯದ ಪ್ರಭಾವವನ್ನು

ಸಮಯಪ್ರಜ್ಞೆ ಎಂದೂ ಗುರುತಿಸಿಕೊಳ್ಳಬಹುದು. ಓದುವ ರೀತಿಯಲ್ಲಿ, ನೆನಪಿಸಿಕೊಳ್ಳುವ ವಿಧಾನದಲ್ಲಿ, ಬರೆಯುವ ಚಟುವಟಿಕೆಗಳ ಮೂಲಕ ಜ್ಞಾನದ ಹೆಚ್ಚಳ ಸಾಧ್ಯವಾಗಲು ಈ ಪ್ರಜ್ಞೆ ಇರಲೇಬೇಕು. ಹೀಗಾಗಿ ಜ್ಞಾನ ಸಂಪಾದನೆಯನ್ನು ಪರಿಪಕ್ವಗೊಳಿಸಿಕೊಳ್ಳಲು ಓದು ಬೇಕು, ಸಮಯ ಪ್ರಜ್ಞೆ ಮತ್ತು ಸಮಯ ಹೊಂದಾಣಿಕೆಯು ಇರಲೇ ಬೇಕು. ವಿಶೇಷವೇನೆಂದರೆ, ಈ ವಿಷಯಗಳನ್ನು ಸಂಪಾದಿಸಲು ಹೆಚ್ಚಿನ ಶ್ರಮ ಬೇಕಿಲ್ಲ. ಅಥವಾ ಮಾಯ ಮಂತ್ರಗಳ ಸಹಾಯವೂ ಬೇಕಿಲ್ಲ. ಮದ್ದಂತೂ ಬೇಡವೇ ಬೇಡ. ಹಾಗೆಂದ ಮಾತ್ರ ಎಲ್ಲವೂ ತನ್ನಷ್ಟಕ್ಕೆ ತಾನೇ ಒದಗಿಬರುವುದಿಲ್ಲ. ಅದಕ್ಕೆ ಪ್ರಯತ್ನವಂತೂ ಬೇಕೇಬೇಕು.

ಕಲಿಯುವ ಕುಶಲತೆ ಹೌದು, ಓದುವುದನ್ನು ಒಂದು ಕಲೆ ಯಾ ಕೌಶಲ್ಯವೆಂದು ಗುರುತಿಸುವವರಿದ್ದಾರೆ. ಈ ಮಾತು ಸತ್ಯವೇ ಆಗಿದ್ದರೂ ಅದನ್ನು ಪಕ್ವಗೊಳಿಸಿಕೊಳ್ಳುವುದಕ್ಕೆ ತಂತ್ರಗಾರಿಕೆ ಇರಬೇಕು. ನನ್ನ ಬಳಿ ಸಲಹೆಗಾಗಿ ಬಂದ ಕಾಲೇಜು ವಿದ್ಯಾರ್ಥಿಯ ಕಲಿಕೆಯ ಸಮಸ್ಯೆಯನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಈ ವಿದ್ಯಾರ್ಥಿ ಆರನೇ ಸೆಮಿಸ್ಟರ್ ಇಂಜಿನಿಯರಿಂಗ್ ಪದವಿಯ ಶಿಕ್ಷಣ ಪಡೆಯುತ್ತಿದ್ದಾನೆ. ತುಂಬಾ ಜಾಣ. ಓದು ಬರಹದಲ್ಲಿ ಅಷ್ಟೇಅಲ್ಲ ಇನ್ನೂ ಅನೇಕ ವಿಷಯಗಳಲ್ಲಿ ಅವನ ಸಾಮಥ್ರ್ಯ ಉತ್ತಮ ಮಟ್ಟದ್ದೇ. ಆದರೆ, ಇತ್ತೀಚೆಗೆ ಅವನು ಗಳಿಸುತ್ತಿರುವ ಅಂಕಕ್ಕೂ ಪಡುತ್ತಿರುವ ಶ್ರಮಕ್ಕೂ ಸಂಬಂಧವಿಲ್ಲವೆನ್ನುವ ದೂರು ಅವನದು. ಸುಮಾರು ಘಂಟೆಗಳ ತನಕ ಓದಿದರೂ ತಲೆಗೆ ಹತ್ತುವುದು ಕಡಿಮೆಯೇ. ಈ ಸಮಸ್ಯೆ ಇತ್ತೀಚಿನದು. ಮೊದಲೆಲ್ಲ ಇಂತಹ ಸಮಸ್ಯೆ ಇದ್ದಿರಲೇ ಇಲ್ಲ ಎಂದು ಹೇಳುತ್ತಾ ಬಹಳ ಆತಂಕ ಪಡುತ್ತಾನೆ. ಭವಿಷ್ಯದ ಬಗ್ಗೆ ಅವನಿಗಿಂತ ಮನೆಯವರದ್ದೇ ಹೆಚ್ಚು. ಮತ್ತಷ್ಟು ಚೆನ್ನಾಗಿ ಓದು, ಪ್ರಯತ್ನಪಡು ಎಂದು ಹೇಳುವುದನ್ನು ಬಿಟ್ಟರೇ ಮತ್ತೇನನ್ನು ಅವರಿಂದ ನಿರೀಕ್ಷಿಸಲಾರ. ಇದೂ ಕೂಡ ಒಂದು ಒತ್ತಡವೇ. ಇವೆಲ್ಲವನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಎಷ್ಟೋ ವೇಳೆ ತಡ ರಾತ್ರಿಯನ್ನು ಮೀರಿ ಓದುವುದೂ ಉಂಟು. ಎಷ್ಟೋ ಸಲ ನಿದ್ರೆಗೆಟ್ಟ ಕಾರಣ ಮಾರನೆಯ ದಿನದ ತರಗತಿಗೆ ‘ಚಕ್ಕರ್’. ಇದು ಅಭ್ಯಾಸವಾಗಿ ನಿಂತಿದೆ. ಇಷ್ಟೆಲ್ಲ ಇದ್ದರೂ ಸಹ ಅವನ ಪ್ರಯತ್ನಕ್ಕೆ ತಕ್ಕಂತಹ ಅಂಕಗಳಾಗಲೀ, ಆತ್ಮವಿಶ್ವಾಸವಾಗಲೀ ಮೂಡಿಲ್ಲ. ಅಂದರೆ, ಪ್ರಯತ್ನವಿದ್ದರೂ ಫಲವಿಲ್ಲದಂತಾಗಿದೆ ಎನ್ನುವ ಭಾವನೆ ಅವನನ್ನು ಮತ್ತು ಪೋಷಕರನ್ನು ಕಾಡಿದೆ. ಅವನ ಓದಿನ ಬಗ್ಗೆ ಮತ್ತು ನೆನಪಿನ ಬಗ್ಗೆ ಕೆಲ ಸಲಹೆಗಳನ್ನು ನೀಡಿದೆ. ಹಾಗೆಯೇ ಅವನ ಪ್ರೀತಿ ಸಂಬಂಧಗಳು ಉಂಟುಮಾಡಿದ್ದ ಗೊಂದಲದ ಬಗ್ಗೆಯೂ ಅರಿವನ್ನು ಮೂಡಿಸಿದೆ. ಸದಾಕಾಲ ಓದುತ್ತಿದ್ದರೂ ನೆನಪಿಗೆ ಎಟುಕದೆ ಹೋಗುತ್ತಿರುವ ಬಗ್ಗೆ ಅವನು ಗಮನಹರಿಸಿಲ್ಲವೆನ್ನುವ ವಿಷಯ ತಿಳಿದ ಮೇಲೆ ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸ ಬಲಗೊಂಡಿದೆ. ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ಘಂಟೆ ಗಟ್ಟಲೇ, ಮೇಲಿಂದ ಮೇಲೆ ಓದಿದ್ದನ್ನೇ ಓದುವುದರಿಂದ ನೆನಪಿನ ಬಲ ಗಟ್ಟಿಯಾಗುತ್ತದೆ ಎನ್ನುವುದು. ಇದು ಸಣ್ಣವಯಸ್ಸಿನಲ್ಲಿ, ಅಲ್ಪಸ್ವಲ್ಪ ವಿಷಯಗಳಿಗೆ ಸಂಬಂಧಿಸಿದಂತೆ ಸರಿ ಇರಬಹುದು. ಆದರೆ, ಕಾಲೇಜಿನ ವಿಷಯಗಳಿಗೆ ಸಂಬಂಧಿಸಿದಂತೆ ಈ ಮಾದರಿಯ ಓದು ಉತ್ತಮ ನೆನಪಿಗೆ ಹೆಚ್ಚು ಸಹಾಯಕಾರಿಯಾಗಿರದು. ಏಕೆಂದರೆ, ಹಲವಾರು ವಿಷಯಗಳತ್ತ ಗಮನಹರಿಸಬೇಕಾದಾಗ ಒಂದೇ ವಿಷಯದ ಓದು, ಮಿಕ್ಕೆಲ್ಲ ವಿಷಯಗಳ ಓದಿನ ಕ್ರಮದ ಮೇಲೆ ಒತ್ತಡ ಹೇರಬಲ್ಲದು. ಅಂದರೆ, ಮೊದಲು ಓದಿ ನೆನಪಿನಲ್ಲಿ ಇರಿಸಿಕೊಂಡಿರುವ ವಿಷಯಗಳು ಹೊಸ ವಿಷಯಗಳನ್ನು ನೆನಪಿನಲ್ಲಿ ಗಟ್ಟಿಯಾಗಿ ಕೂಡದಂತೆ ಮಾಡಬಲ್ಲದು. ಹೀಗಾಗಿ ಓದಿನ ರೀತಿಯೇ ಅವನ ನೆನಪಿನ ಶಕ್ತಿಗೆ ಮಾರಕವಾಗಿತ್ತು. ಜೊತೆಯಲ್ಲಿ ಗೆಳೆತನ ತಂದೊಡ್ಡಿದ ಗೊಂದಲಗಳು ಇತ್ತು.

ಇದನ್ನು ಸರಿಪಡಿಸಲು ಅವನಿಗೆ ತಿಳಿಸಿದ ಕ್ರಮವೆಂದರೆ: 1. ಓದುವ ವಿಧಾನದಲ್ಲಿ ಬದಲಾವಣೆ 2. ನೆನಪಿನ ಶಕ್ತಿಗೆ ಹೆಚ್ಚು ಒತ್ತಡ ಹೇರದಿರುವುದು 3. ಕಲಿಕೆಯ ಕ್ರಮವನ್ನು ಮೇಲಿಂದ ಮೇಲೆ ಮರುಪರಿಶೀಲಿಸುವುದು 4. ನೆನಪಿನ ಶಕ್ತಿಯನ್ನು ತಿಳಿದುಕೊಳ್ಳುವುದು 5. ಸಮಯದ ಸದ್ಬಳಕೆ 6. ಸಮಯದ ವಿತರಣೆ 7. ಮನಸ್ಸಿಗೆ ತ್ರಾಸ ಕೊಡದಿರುವುದು 8. ಬರವಣಿಗೆಯ ಕ್ರಮಗಳು 9. ಆಲೋಚನೆಯನ್ನು ಉತ್ತಮಗೊಳಿಸುವುದು 10. ಆತಂಕ ನಿರ್ವಹಣೆ ಮತ್ತು ಗೆಳೆತನದ ಸಂಬಂಧಗಳು ಈ ಕ್ರಮಗಳನ್ನು ಸರಿಯಾಗಿ ಮತ್ತು ಶಿಸ್ತಿನಿಂದ ಅನುಸರಿಸಿದರೆ ಓದುವ ಉದ್ದೇಶ ಸಫಲವಾಗುತ್ತದೆ ಮತ್ತು ಅಪೇಕ್ಷಿತ ಫಲಿತಾಂಶ ಸಿಗುವುದರಲ್ಲಿ ಸಂದೇಹವಿಲ್ಲ.

ಓದುವ ವಿಧಾನ
ಕಾಲೇಜಿನ ಮಟ್ಟದಲ್ಲಿರುವ ಯುವಕ ಯುವತಿಯರ ಓದಿನ ವಿಧಾನವು ಸಾಮಾನ್ಯವಾಗಿ ಹಿಂದಿನ ತರಗತಿಗಳಿಂದಲೇ ನಡೆದು ಬಂದಂತಹ ಅಭ್ಯಾಸವಾಗಿರುತ್ತದೆ. ಓದುವ ಕ್ರಮಕ್ಕೆ ಹೆಚ್ಚಿನ ಒತ್ತು ನೀಡುವುದು ಕಾಲೇಜಿನ ಮಟ್ಟದಲ್ಲಿ ಸ್ವಭಾವಿಕವಷ್ಟೇ ಅಲ್ಲ, ಅಗತ್ಯವೂ ಕೂಡ. ಏಕೆಂದರೆ, ಹತ್ತಾರು ವಿಷಯಗಳನ್ನು ಕಲಿಯುವ ಸಮಯ ಇದಾಗಿರುತ್ತದೆ. ಹಾಗೆಯೇ ಕಲಿಯಬೇಕಾಗಿರುವ ಮಾಹಿತಿಯು ಅಗಾಧವಾಗಿಯೇ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಎಲ್ಲ ವಿಷಯದ ಪಠ್ಯಕ್ರಮವನ್ನು ಮುಗಿಸುವ ಕಾತುರ ಬೇರೆ. ಇದರಿಂದಾಗಿ ಅವಸರವಸರದಿಂದ ಓದುವುದು ಒಂದು ಮಾದರಿ. ಮತ್ತೇ, ಪರೀಕ್ಷೆಯ ದೃಷ್ಟಿಯಿಂದಲೇ ಓದುವಂತಹವರಿಗೆ, ಅಥವಾ ಪರೀಕ್ಷೆ ಹತ್ತಿರವಾಗುತ್ತಿದೆ ಎನ್ನುವ ಕಾರಣದಿಂದ ಸಿದ್ಧವಾಗುತ್ತಿರುವವರಲ್ಲಿ ಈ ಲಕ್ಷಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ಈ ಮಾದರಿಯ ಮನಃಸ್ಥಿತಿಯೇ ಓದಿನ ನಿಜಬಲವನ್ನು ಮತ್ತು ನೆನಪಿನ ಸಹಜ ಕ್ರಿಯೆಯನ್ನು ತಡೆಗಟ್ಟುತ್ತದೆ. ಏಕೆಂದರೆ, ವಿಷಯ ಗ್ರಹಣ ಶಕ್ತಿಯು ಹೆಚ್ಚಲು ವಿಷಯದ ಬಗ್ಗೆ ಆಸಕ್ತಿ ಇರಬೇಕು. ವಿಷಯದ ಬಗ್ಗೆ ಆಸಕ್ತಿ ಸಂಪೂರ್ಣವಾಗಿ ಇರದಿದ್ದಾಗ ಓದಿದ ವಿಷಯಗಳು ಮನಸ್ಸಿಗೆ ನಾಟುವುದಿಲ್ಲ. ಅಥವಾ ಓದುತ್ತಿರುವಾಗ ಮಾತ್ರ ವಿಷಯವು ನೆನಪಿನಲ್ಲಿ ಉಳಿದಿರುತ್ತದೆ. ಓದಿ ಮುಗಿಸಿದ ಕೆಲಸಮಯದ ನಂತರ ಓದಿದ್ದೆಲ್ಲವು ಮರೆಯಾಗಿಬಿಡುತ್ತದೆ. ಆದುದರಿಂದ ಓದುವ ಉದ್ದೇಶವು ವಿಷಯವನ್ನು ತಿಳಿಯುವುದಕ್ಕಾಗಿಯೇ ಎನ್ನುವುದನ್ನು ಮನಸ್ಸಿಗೆ ಚೆನ್ನಾಗಿ ನಾಟಿಸಿಕೊಳ್ಳಬೇಕು.

ನೆನಪಿನ ಶಕ್ತಿಗೆ ಒತ್ತಡ ಬೇಡ
ಮನುಷ್ಯರಲ್ಲಿರುವ ಅತ್ಯದ್ಭುತ ಶಕ್ತಿಗಳಲ್ಲಿ ನೆನಪು ಮತ್ತು ಮರೆಯುವುದು ಸೇರಿರುತ್ತದೆ. ವಿದ್ಯಾರ್ಥಿಗಳಿಗಂತೂ ಉತ್ತಮ ನೆನಪಿನ ಶಕ್ತಿ ವರದಾನವೇ ಎನ್ನಬಬಹುದು.ಕೆಲವರಿಗೆ ಒಂದು ಸಲ ಓದಿದರೆ ಸಾಕು ಎಲ್ಲವು ನೆನಪಿನಲ್ಲಿ ಉಳಿದು ಬಿಡುತ್ತದೆ. ಮತ್ತೆ ಕೆಲವರಿಗೆ ಎಷ್ಟೇ ಸಲ ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವರಲ್ಲಿ ನೆನಪಿನ ಶಕ್ತಿ ಪ್ರಕೃತಿ ದತ್ತವೇ ಆಗಿದ್ದರೂ ಬಹಪಾಲು ಜನರಲ್ಲಿ ಇದನ್ನು ರೂಢಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಕಲಿಕೆ ಇದ್ದಲ್ಲಿ ನೆನಪು ಹಳಸುವುದಿಲ್ಲ. ಅಂದರೆ, ನೆನಪಿಗೂ ಕಲಿಯುವುದಕ್ಕೂ ಹತ್ತಿರದ ಸಂಬಂಧ. ಓದುವುದು, ಬರೆಯುವುದು ಮತ್ತು ಕೇಳಿಸಿಕೊಳ್ಳುವುದು ಕಲಿಕೆಯ ಕ್ರಮಗಳಲ್ಲಿ ಸೇರಿರುತ್ತವೆÉ. ಕಲಿಯುವ ಉದ್ದೇಶದಿಂದ ಓದುವುದು ಬಹಳ ಮುಖ್ಯ. ಅಂದರೆ, ನೀವು ಓದುತ್ತಿರುವ ವಿಷಯ ಏನೆಂಬುದನ್ನು ತಿಳಿದುಕೊಳ್ಳಬೇಕು. ಕೇವಲ ಹತ್ತಾರು ಸಲ ಓದುವುದರ ಮೂಲಕ ಸಾಲುಗಳು ನೆನಪಿನಲ್ಲಿ ಉಳಿದಿರಬಹುದು, ಆದರೆ ಅವುಗಳನ್ನು ಮಂಡಿಸಬೇಕಾದರೆ ಯಾ ಉಪಯೋಗಕ್ಕೆ ತರಬೇಕಾದರೆ ಇಂತಹ ನೆನಪು ಸಹಾಯವಾಗುವುದಿಲ್ಲ. ಕಂಠಪಾಠ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಆದುದರಿಂದ ನೆನಪಿನ ಸಾಮಥ್ರ್ಯವನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು. ನೆನಪಿನ ಶಕ್ತಿ ಇದೆ ಎನ್ನುವ ವಿಶ್ವಾಸದಿಂದ ಹಲವಾರು ವಿಭಿನ್ನ ವಿಷಯಗಳನ್ನು ಅಥವಾ ಸಂಬಂಧವಿಲ್ಲದ ವಿಷಯಗಳನ್ನು ಮೇಲಿಂದ ಮೇಲೆ ಓದುವುದು ಅಥವಾ ಕಂಠಪಾಠ ಮಾಡುವುದು ಉನ್ನತ ಮಟ್ಟದ ಪರೀಕ್ಷಾ ಪದ್ಧತಿಗೆ ಹೊಂದಿಕೊಳ್ಳಲಾರದು. ಈ ಕಾರಣದಿಂದ ನೆನಪಿನ ಶಕ್ತಿಯ ಅಂದಾಜನ್ನು ಗುರುತಿಸಿಕೊಂಡು ಅದಕ್ಕೆ ಅನುಗುಣವಾದ ರೀತಿಯಲ್ಲಿ ಓದುವುದು ಮತ್ತು ಓದಿದ್ದÀನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಈ ಮೂಲಕ ವಿಷಯದ ಬಗ್ಗೆ ಗ್ರಹಣ ಶಕ್ತಿ ಹೆಚ್ಚುತ್ತದೆ. ನೆನಪಿನ ಮೇಲಷ್ಟೇ ಹೊರೆ ಬೀಳುವುದಿಲ್ಲ.

ಕಲಿಕೆಯ ಕ್ರಮಗಳನ್ನು ತಿಳಿದುಕೊಂಡಿರಿ
ಕಲಿಕೆ ಎಂದರೆ ವಿಷಯಗಳನ್ನು ತಿಳಿದು ಕೊಳ್ಳುವುದು ಎನ್ನುವುದು ಸಾಮಾನ್ಯರ ಅರಿವು. ಆದರೆ, ಕಲಿಕೆ ವರ್ತನೆಯನ್ನು ಮಾರ್ಪಾಡಿಸುತ್ತದೆ ಅಥವಾ ಹೊಸ ವರ್ತನೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಹೊಸದನ್ನು ಮನಸ್ಸಿನಲ್ಲಿ ಸೇರಿಸಿಟ್ಟುಕೊಳ್ಳುವುದು ಮತ್ತು ಅದರಿಂದ ಉಂಟಾಗುವ ಮಾನಸಿಕ ಬಲ ಅಥವಾ ಬದಲಾವಣೆಗೆ ಕಲಿಕೆಯೇ ಕಾರಣವಾಗಿರುತ್ತದೆ. ಹೊಸ ವಿಷಯಗಳನ್ನು ಸ್ಮøತಿಯಲ್ಲಿ ಗಟ್ಟಿಯಾಗಿ ನಿಂತಿರುವುಂತೆ ಮಾಡಲು ಕಲಿಕೆ ಬೇಕು. ಕಲಿಕೆಯಲ್ಲಿ ಹಲವಾರು ವಿಧಗಳಿವೆ. ಕೆಲವು ಅಭ್ಯಾಸದಿಂದ ಗಟ್ಟಿಯಾದರೇ ಮತ್ತೇ ಕೆಲವು ಅಥರ್Àವಾಗುವುದರ ಮೂಲಕ ಗಟ್ಟಿಯಾಗುತ್ತದೆ. ಕೆಲವು ರೀತಿಯ ಕಲಿಕೆಯಲ್ಲಿ ಅಂದಾಜು, ಊಹೆಗಳ ಮೂಲಕ ವಿಷಯ ಗ್ರಹಣ ಹೆಚ್ಚಿ ಗಟ್ಟಿಯಾದ ಕಲಿಕೆ ಸಾಧ್ಯವಾಗುತ್ತದೆ. ಈ ಮೂರು ವಿಧಾನಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ತಿಳಿದುಕೊಂಡಿದ್ದರೆ ಪರೀಕ್ಷೆಯ ಸಮಯದಲ್ಲಂತೂ ಅತಿ ಸಹಾಯಕಾರಿ. ಉದಾಹರಣೆಗೆ, ವಿಜ್ಞಾನದ ವಿಷಯಗಳಲ್ಲಿ ತತ್ವ, ಸೂತ್ರಗಳಿಗೆ ಮಹತ್ವವಿರುತ್ತದೆ. ತತ್ವ ಸೂತ್ರಗಳನ್ನು ವಿವರಿಸುವುದಕ್ಕೆ ನಿದರ್ಶನಗಳು ಇರುತ್ತವೆ. ಇವುಗಳಿಗೆ ಹಂತಗಳೂ ಉಂಟು. ಕಲಿಯುವರÀಲ್ಲಿ ಇಂತಹದೊಂದು ಪೂರ್ವಯೋಜನೆ ಇರಬೇಕು. ಪೂರ್ವಯೋಜನೆಯ ಗುಣವನ್ನು ಅಳವಡಿಸಿಕೊಳ್ಳುವುದು ಕಷ್ಟವೇನಲ್ಲ. ತರ್ಕ, ಅಥವಾ ಒಂದು ಹಂತದೊಂದಿಗೆ ಇನ್ನೊಂದು ಹಂತದ ಸಂಬಂಧವಿರುವ ರೀತಿಯನ್ನು ತಿಳಿದುಕೊಳ್ಳುವುದರ ಮೂಲಕ ಪೂರ್ವಯೋಜನಾ ವಿಧಾನವನ್ನು ಬಲಪಡಿಸಿಕೊಳ್ಳಲು ಸಾಧ್ಯವಿದೆ. ಹೀಗೆ ಕಲಿಯ ಬೇಕಾಗಿರುವ ವಿಷಯದಲ್ಲಿ ಸೂತ್ರಗಳಿಗೆ ಎಷ್ಟು ಪ್ರಾಧಾನ್ಯತೆ ಇದೆ, ಅವುಗಳ ಪಾತ್ರವೇನೆಂಬುದನ್ನು ತಿಳಿದುಕೊಂಡಂತಹ ವಿದ್ಯಾರ್ಥಿಗೆ ಮರೆವಿನ ಹಿಂಸೆ ಬರಲಾರದು. ಇದೇ ರೀತಿಯಲ್ಲಿ ಸಮಾಜ ವಿಜ್ಞಾನದ ವಿಷಯಗಳನ್ನು ಸಹ ಕಲಿಯಲು ಸಾಧ್ಯವಿದೆ. ಆದರೆ, ತತ್ವಗಳು ಯಾವ ಕಾರಣಕ್ಕಾಗಿ ನೀಡಲಾಗಿದೆ, ಅವುಗಳ ಪರ ವಿರೋಧಗಳನ್ನು ತಿಳಿದುಕೊಳ್ಳುವುದುರ ಮೂಲಕ ಉತ್ತಮ ವಿಷಯ ಸಂಗ್ರಹಣೆ ಮತ್ತು ಅನ್ವಯಿಕೆ ಸಾಧ್ಯ. ಈ ಎಲ್ಲ ಕ್ರಮಗಳಲ್ಲಿಯೂ ಬರವಣಿಗೆಗೆ ಹೆಚ್ಚು ಮಹತ್ವ ಕೊಡಬೇಕಾಗುತ್ತದೆ. ಅಂದರೆ, ಓದಿಗಿಂತ ಬರೆವಣಿಗೆಯನ್ನು ರೂಢಿಸಿಕೊಳ್ಳುವುದನ್ನು ಕಲಿಯಲೇಬೇಕು.

ನೆನಪಿನ ಶಕ್ತಿಯ ಬಗ್ಗೆ ಒಂದೆರಡು ಮಾತು
ನಿಮಗೆ ಈಗಾಗಲೇ ತಿಳಿದಿರುವುಂತೆ ನೆನಪಿನ ಶಕ್ತಿ ಇದ್ದವರಿಗೆ ಪರೀಕ್ಷೆ ಸವಾಲಾಗದು. ಈ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಎಲ್ಲ ವಿಷಯಗಳು ನೆನಪಿನಲ್ಲಿ ಇರಬಹುದು, ಆದರೆ, ಅವುಗಳಲ್ಲಿ ಮುಖ್ಯವಾದದು ಯಾವುದು ಮತ್ತು ಅದನ್ನು ಸರಾಗವಾಗಿ ಎಲ್ಲಿ, ಯಾವಾಗ ಮತ್ತು ಹೇಗೆ ಹೊರತರಬೇಕು ಎನ್ನುವುದು ಸಹ ಅತಿ ಮುಖ್ಯ. ಅಂದರೆ, ವಿದ್ಯಾರ್ಥಿಯೊಬ್ಬನಿಗೆ ಕಂಠಪಾಠ ಮಾಡುವ ಗುಣ ಚೆನ್ನಾಗಿಯೇ ಇರಬಹುದು. ಆದರೆ, ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುವಾಗ ಗೊಂದಲಗಳು ಉಂಟಾಗುವ ಸಾಧ್ಯತೆಗಳಿವೆ. ಆದುದರಿಂದ ನೆನಪಿನ ಶಕ್ತಿಯನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವುದನ್ನು ತಿಳಿದುಕೊಳ್ಳಬೇಕು. ನೆನಪಿನಲ್ಲಿ ಉಳಿಯುವುದು ನೀವು ಕಲಿತಿದ್ದೇ ಆಗಿರುತ್ತದೆ. ಹೀಗಾಗಿ ನೀವೇನಾದರೂ ಸರಿಯಾದ ವಿಷಯವನ್ನು ಕಲಿತಿರಲಿಲ್ಲವೆಂದರೆ ತಪ್ಪೇ ನಿಮ್ಮ ನೆನಪಿನಿಂದ ಹೊರಬರುತ್ತದೆ. ಈ ಮಾದರಿಯ ತಪ್ಪಿನ ಉದಾಹರಣೆಯೆಂದರೆ, ಯಾರೋ ಹೆಸರನ್ನು ಯಾರಿಗೋ ಹಚ್ಚುವುದು. ಅದೇ ರೀತಿಯಲ್ಲಿ ಉತ್ತರವನ್ನು ಬರೆದರೆ ಅದರ ಪರಿಣಾಮವನ್ನು ನೀವೇ ಅಂದಾಜು ಮಾಡಿ. ನೆನಪಿನ ಕ್ರಮದಲ್ಲಿ ವಿಷಯ ಆಧಾರಿತ ನೆನಪು, ಪ್ರಸಂಗ ಆಧಾರಿತ ನೆನಪು, ಕುರುಹು ಯಾ ಸೂಚನೆಗಳಿಂದ ಬಂದಂತಹ ನೆನಪುಗಳು ಓದು ಮತ್ತು ಬರಹಕ್ಕೆ ನೆರವಾಗುತ್ತದೆ. ಇವುಗಳಲ್ಲಿ ನಿಮ್ಮ ಶಕ್ತಿ ಯಾವ ರೀತಿಯತ್ತ ಇದೆ ಎನ್ನುವುದರ ಅಂದಾಜು ಮಾಡಿಕೊಂಡಿದ್ದರೆ ಉತ್ತಮ. ಏಕೆಂದರೆ, ಕಲಿಯುವ ರೀತಿಯನ್ನು ಉತ್ತಮಪಡಿಸಿ ಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ.

ಸಮಯದ ಸದ್ಬಳಿಗೆ
ವಿದ್ಯಾರ್ಥಿಗಳು ಅತ್ಯಗತ್ಯವಾಗಿ ಕಲಿಯಲೇ ಬೇಕಾಗಿರುವಂತಹದ್ದು ಇದು. ಸಮಯದ ಬಲವು ಕಲಿಕೆ ಮತ್ತು ಸ್ಮøತಿ ಶಕ್ತಿಯಷ್ಟೇ ಇರುತ್ತದೆ ಎಂದರೂ ತಪ್ಪಾಗಲಾರದು. ವಿದ್ಯಾರ್ಥಿ ಜೀವನದಲ್ಲಿ, ಅದರಲ್ಲಿಯೂ ಹದಿಹರೆತನದ ಮಧ್ಯಾವಧಿಯಿಂದ ಹಿಡಿದು ವಯಸ್ಕತನದ ಮೊದಲ ಹಂತದಲ್ಲಿರುವ ಯುವಜನರಿಗೆ ಇದರ ಬಳಕೆಯ ಬಗ್ಗೆ ಕಾಳಜಿ ಅಥವಾ ಎಚ್ಚರಿಕೆ ಸಾಮಾನ್ಯವಾಗಿ ಕಡಿಮೆಯೇ ಇರುತ್ತದೆ ಎನ್ನಬಹುದು. ಓದುವುದು, ಬರೆಯುವುದು ಮತ್ತು ವಿಷಯ ಗ್ರಹಣಶಕ್ತಿಯು ಸಮಯವನ್ನು ಅವಲಂಬಿಸಿರುತ್ತದೆ. ಉದಾಹರಣೆ ಹೇಳುವುದಾದರೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಯ ಮನಸ್ಸು ವಿಷಯದತ್ತ ಹೋಗದಿದ್ದಾಗ ಕಾಲಹರಣವೆಂದೇ ಕರೆಯಬೇಕಾಗುತ್ತದೆ. ಏಕೆಂದರೆ, ಕಲಿಯವ ಸಮಯದಲ್ಲಿ ಮನಸ್ಸು ಮತ್ತೊಂದು ಕ್ರಿಯೆಯನ್ನು ಮಾಡುವುದರ ಮೂಲಕ ಕಲಿಕೆಗೆ ನಿಗದಿಪಡಿಸಿದ್ದ ಅಥವಾ ಅಗತ್ಯವಿದ್ದ ಸಮಯ ನಾಶಪಡಿಸಿಬಿಟ್ಟಿರುತ್ತದೆ. ಇದಲ್ಲದೇ, ಬೋಧನಾ ಕ್ರಿಯೆಯೂ ಸಹ ವ್ಯಕ್ತಿ ಕಲಿಕೆ ಮತ್ತು ನೆನಪಿನ ಶಕ್ತಿಗೆ ಪೂರಕವಾಗಿರುತ್ತದೆ. ಇನ್ನು ಮನಸ್ಸಿಲ್ಲದೆ ಪಾಠ ಕಲಿಯುವುದು ಅತಿ ಸುಲಭವಾಗಿ ಅಭ್ಯಾಸವಾಗಿ ಬಿಡುವಂತಹ ಲಕ್ಷಣ. ಇದು ಓದುವಾಗಲೂ, ಬರೆಯುವಾಗಲೂ ಕಾಣಿಸಿಕೊಳ್ಳಬಹುದು. ನಾನು ಕಂಡಿರುವ ನೂರಾರು ವಿದ್ಯಾರ್ಥಿಗಳಲ್ಲಿ ಇದೇ ನೆನಪಿನ ಶಕ್ತಿ ಮತ್ತು ಗಮನ ಹರಿಸುವ ಶಕ್ತಿಯನ್ನು ಕುಂದುವಂತೆ ಮಾಡಿರುತ್ತದೆ. ಓದುತ್ತಿರುವಾಗ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ ಎನ್ನುವ ಸ್ಥಿತಿ ಉಂಟಾಗಲು ಇದೇ ಕಾರಣ ಎನ್ನಬಹುದು.

ಸಮಯ ಹಣಕ್ಕಿಂತಲೂ ಬೆಲೆ ಬಾಳುವಂತಹದ್ದು
ವರ್ಷವಿಡಿ ಓದಿ ಬರೆಯದೇ ಪರೀಕ್ಷೆಯ ಸಮಯದಲ್ಲಿ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಮೊದಲ ಅಳಲು ಎಂದರೆ ಸಮಯವಿರದಿರುವುದು. ಕೊನೆಯ ಘಳಿಗೆಯಲ್ಲಿ ದೇಹ ಮತ್ತು ಮನಸ್ಸನ್ನು ದಂಡಿಸುವುದರ ಮೂಲಕ ಪರೀಕ್ಷೆ ಸಿದ್ಧತೆಯನ್ನು ಮಾಡಿಕೊಳ್ಳುವ ವಿದ್ಯಾರ್ಥಿಗಳು ಕಾಲಾನುಕಾಲದಲ್ಲಿ ಯಶಸ್ಸಿನಿಂದ ಲಭಿಸುವ ಸುಖವನ್ನು ಪಡೆಯಲಾರದೇ ಹೋಗುತ್ತಾರೆ. ಅವಸರ, ಆತಂಕ ಮತ್ತು ಭಯದ ಸ್ಥಿತಿಗಳನ್ನು ಸಮಯ ದುರುಪಯೋಗ ಉಂಟುಮಾಡಬಲ್ಲದು. ಸಮಯದ ವಿತರಣೆ ಮತ್ತು ಉಪಯೋಗವನ್ನು ಅಭ್ಯಾಸ ಮಾಡಿಕೊಂಡೇ ಪಕ್ವಮಾಡಿಕೊಳ್ಳಬೇಕಾಗುತ್ತದೆ. ಸಮಯವನ್ನು ಸದುಪಯೋಗಪಡಿಸಿ ಕೊಳ್ಳುವ ಹಲವಾರು ಕ್ರಮಗಳಿವೆ, ಅವುಗಳೆಂದರೆ:
ಓದು ಬರಹಕ್ಕಾಗಿ ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳುವುದು ಮತ್ತು ಅದಕ್ಕೆ ಬದ್ಧವಾಗಿರುವುದು ಮರಂಜನೆಗಾಗಿ ಮತ್ತು ಕ್ರೀಡೆಗಾಗಿ ಸಮಯವನ್ನು ಮೀಸಲಿಡುವುದು ಗೆಳೆಯರು ಮತ್ತು ಮನೆಯವರಿಗಾಗಿ ಸಮಯವನ್ನು ಗುರುತಿಸಿಕೊಳ್ಳುವುದು ಇತರರ ಸಮಯವನ್ನು ಕಸಿದುಕೊಳ್ಳದಿರುವುದು ಅನಗತ್ಯವಾಗಿ ಅಥವಾ ಉಪಯುಕ್ತವೆನಿಸದ ವಿಷಯಗಳತ್ತ ಸಮಯ ವಿತರಣೆ ಮಾಡದಿರುವುದು ಪರೀಕ್ಷೆಯ ಸಮಯದಲ್ಲಿ ಓದು, ಬರಹ ಮತ್ತು ಪುನರ್ಮನನಕ್ಕೆ ಹೆಚ್ಚಿನ ಸಮಯ ನೀಡುವುದು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಮತ್ತು ವಿಶ್ರಾಂತಿಗಾಗಿ ಸಮಯವನ್ನು ನಿಗದಿಪಡಿಸುವುದು ಗೆಳೆಯರ ಸಮಯವನ್ನು ಹಾಳುಮಾಡದಿರುವುದು ಮತ್ತು ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳದಿರುವುದು

ವಿದ್ಯಾರ್ಥಿ ಜೀವನ ಮತ್ತು ಒತ್ತಡ
ಆಧುನಿಕ ವಿದ್ಯಾರ್ಥಿಯ ಜೀವನ ಒತ್ತಡದ ಬದುಕು ಎನ್ನುವ ಮಾತನ್ನು ಹೆಚ್ಚು ಜನ ಒಪ್ಪಲಾರರು. ಆದರೂ ಸಹ ಇದು ನಿಜವೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ಇಂದಿನ ಯುವಜನರು ಹೊಸ ವಿಷಯಗಳು, ಜಾಗತೀಕರಣ ತಂದೊಡ್ಡುತ್ತಿರುವ ಪೈಪೋಟಿಗಳು, ತಂತ್ರಜ್ಞಾನದ ಆವಿಷ್ಕಾರಗಳು ಹೊರತರುತ್ತಿರುವ ನವೀನ ಬಯಕೆ ಮತ್ತು ಬೇಡಿಕೆಗಳು ಹಾಗೂ ಯುವಜನರ ಆಶೋತ್ತರಗಳಿಗೆ ಸ್ಪಂದಿಸದ ಮನೆಯ ಅಥವಾ ಶೈಕ್ಷಣಿಕ ವಾತಾವರಣ. ಇವುಗಳೆಲ್ಲವು ಕಾಲೇಜು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಒತ್ತಡ ಹೇರುವುದರಲ್ಲಿ ಸಂದೇಹವಿಲ್ಲ. ಇದರ ಜೊತೆಯಲ್ಲಿ ಹೊಸ ಸಂಬಂಧ ಮತ್ತು ಸಂಪರ್ಕಗಳು, ಹೆಣ್ಣು ಗಂಡಿನ ನಡುವೆ ಸಾಧ್ಯವಿರುವ ಸರಸ ವಿರಸಗಳು ವಿದ್ಯಾರ್ಥಿಯ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಬಲ್ಲದ್ದಾಗಿದೆ. ಇದರೊಂದಿಗೆ ಸಾಹಸ ಪ್ರವೃತಿ ಮತ್ತು ಅತಿಯಾದ ಆಸೆಗಳು ಸಹ ಮಾನಸಿಕ ಒತ್ತಡಗಳನ್ನು ಉಂಟುಮಾಡಬಲ್ಲದ್ದಾಗಿರುತ್ತದೆ.
ಇಂತಹ ಸಾಮಾಜಿಕ ಮತ್ತು ಸಾಂಸ್ಕøತಿಕ ಸನ್ನಿವೇಶದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಮ್ಮೊಮ್ಮೆ ಕ್ಷೋಭೆಯ ಕಾಣಿಸಿಕೊಳ್ಳಬಹುದು. ಆತಂಕ, ಉಧ್ವಿಘ್ನತೆಗಳಿಗೆ ತುತ್ತಾದ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗುತ್ತಿರುವುದು ಎಲ್ಲಡೆ ಕಂಡುಬರುತ್ತದೆ. ಹೀಗಾಗಿ ವಿದ್ಯಾರ್ಥಿ ದಿನಗಳನ್ನು ಉತ್ಸಾಹ, ಉಲ್ಲಾಸದ ದಿನಗಳಷ್ಟೇ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿತ್ಯವೂ ಹೊಸ ಹೊಸ ವಿಷಯಗಳು, ರೀತಿಗಳು ಮತ್ತು ಬೇಡಿಕೆಗಳನ್ನು ಮೀರುವಂತಹ ಶಕ್ತಿಯನ್ನು ವಿದ್ಯಾರ್ಥಿಗಳು ಕಷ್ಟಪಟ್ಟೇ ತಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಹೀಗೆಂದ ಮಾತ್ರಕ್ಕೆ ಸಮಾಜ, ಸಂಸ್ಕøತಿಗಳು ವಿದ್ಯಾರ್ಥಿಗಳ ನೆರವಿಗೆ ಬರುತ್ತಿಲ್ಲವೆಂದು ತಿಳಿಯಬಾರದು. ಆದರೆ, ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊಣೆ ಇದೆ ಎನ್ನುವುದೇ ಇದರ ಅರ್ಥ. ಮತ್ತು ಅದಕ್ಕೆ ಅಗತ್ಯವಿರುವಂತಹ ಸಾಮಾಜಿಕ ಸೌಲಭ್ಯಗಳು, ಮಾರ್ಗದರ್ಶನ ಮತ್ತು ಸಲಹೆಯೂ ಹೇರಳವಾಗಿಯೇ ಸಿಗುತ್ತಿದೆ. ಒಟ್ಟಿನಲ್ಲಿ ಕಾಲೇಜು ಮಟ್ಟದ ವಿದ್ಯಾರ್ಥಿ ಜೀವನ ಹೊಸಬದುಕಿನ ಅಂದಾಜನ್ನು ಕಲ್ಪಿಸುವಂತಹದ್ದೇ ಆಗಿರುತ್ತದೆ. ಇಲ್ಲಿ ವ್ಯಕ್ತಿಯ ಪ್ರಯತ್ನ
ಮತ್ತು ಸಾಧನೆಗಳಿಗೆ ಅವಕಾಶವಿದೆ, ಮನ್ನಣೆಯೂ ಸಿಗುತ್ತದೆ. ಆದರೆ, ಪ್ರಯತ್ನ, ಕಲಿಕೆ ಮತ್ತು ಸಮಯಪ್ರಜ್ಞೆಗಳತ್ತ ಗಮನಹರಿಸಿದಾಗ ಮಾತ್ರ.